Friday, December 9, 2011

ವ್ಯಕ್ತಿ ಪ್ರಾಮುಖ್ಯತೆ - Give importance to others

ಎಲ್ಲರೂ ತಮ್ಮನ್ನು ಒಬ್ಬ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ಬಯಸುತ್ತಾರೆ. ನಮ್ಮ ಒಡನಾಟ ಇದನ್ನು ಅವಲಂಬಿಸಿದೆ. ನಾವಿದನ್ನ ಹೇಗೆ ಬೆಳೆಸಿಕೊಳ್ಳಬಹುದು?

1. ಮೊದಲ ಹೆಜ್ಜೆಯೇ, ಇನ್ನೊಬ್ಬ ವ್ಯಕ್ತಿಗೆ ಪ್ರಾಮುಖ್ಯತೆ ಕೊಡಲು ನಮ್ಮ ಮನಸ್ಸನ್ನು ಸಜ್ಜು ಗೊಳಿಸುವುದು.
ಇದನ್ನು ನಮ್ಮೊಳಗೇ ಯಾವಾಗಲೂ ನೆನಪಿಸುತ್ತಾ ಇರುತ್ತಿದ್ದಂತೆ, ನಮ್ಮ ಭಾವನೆಗಳು ಅದೇ ರೀತಿ ಬೆಳೆಯುತ್ತದೆ. ಕಾಲ ಕಳೆಯುತ್ತಿದ್ದಂತೆ, ನಮ್ಮೊಳಗಿಂದ ನಮಗರಿವಿಲ್ಲದಂತೆ, ಈ ಭಾವನೆಗಳ ತರಂಗವು ಕೆಲಸ ಮಾಡುತ್ತದೆ. ಅದನ್ನು ಆ ವ್ಯಕ್ತಿಯ ಒಳ ಮನಸ್ಸು ಗುರುತಿಸುತ್ತದೆ.
ಇದಕ್ಕೆ ವಿರುದ್ಧವಾಗಿ ನಾವು ನಾಟಕೀಯವಾಗಿ ಇನ್ನೊಬ್ಬನಿಗೆ ಪ್ರಾಮುಖ್ಯತೆ ಕೊಡಲು ಹೋದಲ್ಲಿ, ಅವನ ಒಳ ಮನಸ್ಸು ಅದನ್ನು ಕಂಡುಕೊಂಡು, ಅಲ್ಲೇ ನಮ್ಮನ್ನು ತಿರಸ್ಕರಿಸುತ್ತದೆ!

2. ಎಲ್ಲರನ್ನೂ ಗುರುತಿಸಿಕೊಳ್ಳಿ.
ಅದು ಹೇಗೆ? ನಮ್ಮ ಪರಿಚಯಸ್ತರು ಎಲ್ಲೇ ಸಿಗಲಿ, ಅವರೆಲ್ಲರನ್ನೂ ಒಮ್ಮೆ ಗುರುತಿಸಿಕೊಳ್ಳಿ. ಅಂದರೆ ಅವರಿಗೆ ನಾವು ಅವರನ್ನು ಗುರುತಿಸಿಕೊಂಡಿದ್ದೇವೆ ಎನ್ನುವುದನ್ನ ತೋರ್ಪಡಿಸಿ - ಉದಾ: ವಂದನೆಗಳ ಮೂಲಕ, ಸಂಜ್ಞೆ ಮೂಲಕ(ಕಣ್ಸನ್ನೆ, ಕೈಸನ್ನೆ, ಮುಗುಳ್ನಗೆ).
ನಮ್ಮನ್ನು ಇನ್ನೊಬ್ಬರು ಹಾಗೆ ಗುರುತಿಸಿಕೊಂಡು ತೋರ್ಪಡಿಸಿದಾಗ ಹೇಗನಿಸುತ್ತದೆಯೋ, ಹಾಗೇನೇ ಅವರಿಗೂ ಕೂಡ ಎನ್ನುವುದನ್ನು ನೆನಪಿಸಿಕೊಳ್ಳಿ!

3. ಇನ್ನೊಬ್ಬನ ತಪ್ಪುಗಳನ್ನ ಬೆರಳೆತ್ತಿ ತೋರಿಸುವಾಗ, ಉಳಿದ ನಾಲ್ಕೂ ಬೆರಳುಗಳು ನಮ್ಮ ಕಡೆಗೆ ಇದೆ ಎಂಬುದನ್ನ ಮರೆಯ ಬೇಡಿ.
ಅವಶ್ಯಕತೆ ಇದ್ದಾಗ ಮಾತ್ರ, ಅವನ ಅಹಂ ಗೆ ನೋವಾಗದಂತೆ, ನಾಜೂಕಿನಿಂದ ತಪ್ಪನ್ನ ತಿದ್ದಿಕೊಳ್ಳಲು ಸೂಚಿಸಿ, ಅವಕಾಶ ನೀಡಬೇಕೇ ವಿನಃ ಅದೇ ಅಭ್ಯಾಸವನ್ನ್ನುಬೆಳೆಸಿಕೊಂಡರೆ ನಮ್ಮನು ಆ ವ್ಯಕ್ತಿ ದೂರವಿಡಲನುವಾಗುವನು.

Thursday, November 24, 2011

ಹೆಸರು - Name

ಹೆಸರಲ್ಲೇನಿದೆ ಮಹಾ?
ಹಾಗಾದರೆ, ನಿಮ್ಮ ಹೆಸರನ್ನ ಅಲ್ಪ ಬದಲಾವಣೆ ಮಾಡಿ ಇನ್ನೊಬ್ಬ ಕೂಗಿದಾಗ ನಿಮಗೆ ಹೇಗನಿಸುತ್ತೆ?

ಎಲ್ಲರೂ ಅವರವರ ಹೆಸರನ್ನ ಸರಿಯಾದ ರೀತಿಯಲ್ಲಿ ಕೇಳಿಸಿಕೊಳ್ಳಲು ಇಷ್ಟಪಡುವರೇ ಹೊರತು ಅದರ ಅಲ್ಪ ಬದಲಾವಣೆ/ಅವಹೇಳನ ವನ್ನ ಯಾರೂ ಸಹಿಸಲಾರರು. ಮಾತನಾಡುವಾಗ/ಬರೆಯುವಾಗ ಹೆಸರನ್ನು ಸಾಧ್ಯವಾದಷ್ಟು ಪುನ: ಪುನ: ಉಪಯೋಗಿಸುವುದು ನೀವೊಬ್ಬ ಪ್ರಭಾವೀ ಸಂಪರ್ಕ ವ್ಯಕ್ತಿಯಾಗಲು ಸಹಾಯವಾಗುವ ಮೈಲುಗಲ್ಲು.

"Everybody wants to be recognized" - "ಪ್ರತಿಯೊಬ್ಬನೂ ತಾನೊಬ್ಬ ವ್ಯಕ್ತಿಯೆಂದೆನಿಸಿಗೊಳ್ಳಲು ಬಯಸುತ್ತಾನೆ"

ಅವನ ಸರಿಯಾದ ಹೆಸರನ್ನು ಉಪಯೋಗಿಸಿದಾಗ, ಅವನನ್ನು ನೀವು ಒಬ್ಬ ಒಳ್ಳೆಯ ವ್ಯಕ್ತಿಯೆಂದು ಗುರುತಿಸಿದ್ದೀರಿ ಎನ್ನುವ ಭಾವನೆ ಅವನೊಳಗೆ ಹುದುಗಿರುವ ಅಹಂ ಗೆ ತಟ್ಟುತ್ತದೆ. ಹೆಸರೆನ್ನುವುದು ಅವನ ಬಾಲ್ಯದಿಂದಲೇ ಸಂಭೋದಿಸಲ್ಪಡುತ್ತಿರುವುದರಿಂದ, ಅದರಲ್ಲಿ ವ್ಯತ್ಯಾಸ ಕಂಡಾಗ, ಅವನೊಳಗೆ ಏನೋ ನನ್ನನ್ನು ಇವರು ಅವಮಾನಿಸುತ್ತಿದ್ದಾರೆ ಎನ್ನುವ ಭಾವನೆ ಒಳತಳ್ಳಲ್ಪಟ್ಟು, ನಿಮ್ಮನ್ನು ಅಲ್ಲೇ ತಿರಸ್ಕರಿಸಲು ದಾರಿಯಾಗುತ್ತದೆ.

ಉಚ್ಛರಿಸುವಾಗ(ಅಥವಾ ಕಾಗದ ಬರೆಯುವಾಗ) ಹೆಸರಿನ ಸಂಬೋಧನೆಯಲ್ಲಿ ಆದ ಸಣ್ಣ ಪ್ರಮಾದದಿಂದ ಎಷ್ಟೊ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡದ್ದೊ, ಮತ್ತಿನ್ನಿತರೇ ಕಳಕ್ಕೊಂಡ ಉದಾಹರಣೆಗಳು ಜಗತ್ತಿನಲ್ಲಿ ತುಂಬಾ ಕಾಣಸಿಗುತ್ತದೆ (ಕೇಳಬಹುದು).

Tuesday, November 22, 2011

ಮೂರನೇ ವ್ಯಕ್ತಿಗೆ ಸಂಪರ್ಕ ಸಾಧಿಸಬೇಕಾದಾಗ ಪ್ರಾಮುಖ್ಯ ವಿಚಾರಗಳು - Points to be noted in third party communication

ಅತ್ಯಂತ ಪ್ರಾಮುಖ್ಯ ವಿಚಾರಗಳು:-

1. ಯಾರಿಗಾದರು ಬೇರೆಯವರ ಮೂಲಕ ವಿಷಯ ತಿಳಿಸಬೇಕಿದ್ದರೆ,
ಆತನ ವಯಸ್ಸು, ಬುದ್ದಿ ಶಕ್ತಿ, ಅನುಭವ - ಆತನ ಕೇಳಿಸಿಕೊಳ್ಳುವಿಕೆ ಶಕ್ತಿ, ವಿಷಯದ ಮಹತ್ವ - ಇವುಗಳ ಬಗ್ಗೆ ನಿಮಗೆ ತಿಳುವಳಿಕೆ ಇರಲಿ.

2. ಆತ ಚಿಕ್ಕವನಾಗಿದ್ದರೆ ಅಥವಾ ಓದು ಬರಹ ಕಡಿಮೆಯಿದ್ದರೆ, ನೀವು ಅವನಿಗೆ ತಿಳಿಸಿದ ವಿಷಯ ಮಗದೊಮ್ಮೆ ಅವನ ಬಾಯಿಂದ ಹೇಳಿಸಿಕೊಳ್ಳಿ.

3. ಯಾರಿಗೆ ವಿಷಯ ತಿಳಿಸಬೇಕೊ ಅವನ ಗ್ರಹಣ ಶಕ್ತಿಯ ಬಗ್ಗೆ ಅರಿವಿರಲಿ.

4. ಬಾಯಲ್ಲಿ ಹೇಳಿ ಕಳಿಸುವುದಕ್ಕಿಂತ ಬರೆದು ಕಳಿಸುವುದು ಉತ್ತಮ.

5. ನೀವು ಬಾಯಲ್ಲಿ ಹೇಳಿ ಕಳಿಸಿದರೂ, ನಿಮಗೆ ಬೇಕಾದ ವಿಷಯ ಮಹತ್ವದ್ದಾದರೆ ಅದನ್ನು ಬರೆಸಿಕೊಂಡು ಬಾ ಅಂತ ಹೇಳಿ.

6. ಯಾರಿಗೆ ವಿಷಯ ತಿಳಿಸಬೇಕೊ ಆತನನ್ನ ಹುಡುಕಿಕೊಂಡು ಹೋಗುವ ವ್ಯಕ್ತಿಗೆ ಸರಿಯಾದ ಮಾಹಿತಿ ನೀಡಿ.

7. ಯಾರಿಗೆ ವಿಷಯ ತಿಳಿಸಬೇಕೊ ಅವರು ಸಿಗದಿದ್ದಾಗ ಮುಂದೇನು ಮಾಡಬೇಕು ಅನ್ನುವುದರ ಬಗ್ಗೆ, ನೀವು ಕಳಿಸುತ್ತಿರುವ ವ್ಯಕ್ತಿಗೆ ಸರಿಯಾದ ಮಾಹಿತಿ ನೀಡಿ.

8. ಯಾರನ್ನು ಸಂಪರ್ಕಿಸಬೇಕೊ ಆ ವ್ಯಕ್ತಿಯ ಮನೆ ಅಥವಾ ಆಫೀಸ್ ಗೆ ನೀವು ಕಳಿಸುವ ನಿಮ್ಮ ಮಿತ್ರ ಯಾ ಅಟೆಂಡರ್ ಈ ಕೆಳಗಿನ ವಿಷಯಗಳನ್ನ ಮರೆಯುತ್ತಾನೆ -
ಅವರ ಮನೆ ಬಾಗಿಲು ಹಾಕಿದೆ - ಆದ್ದರಿಂದ ಅವರಿಲ್ಲ.
ಅವರ ಮನೆ ಮುಂದೆ ಅವರ ಸ್ಕೂಟರ್, ಬೈಕ್, ಕಾರು ಇಲ್ಲ - ಆದ್ದರಿಂದ ಅವರಿಲ್ಲ.
ಅವರ ಮನೆ ದೀಪವಿರಲಿಲ್ಲ - ಆದ್ದರಿಂದ ಅವರಿಲ್ಲ.
ತುಂಬಾ ಹೊತ್ತು ಬೆಲ್ ಮಾಡಿದೆ - ಬಹುಶ: ಅವರು ಊರಲ್ಲಿಲ್ಲ.
ಅವರ ಮನೆ ವಾಚ್ ಮನ್ ನನ್ನ ಕೇಳಿದೆ - ಅವರಿಲ್ಲ ಅಂದ.
ಅವರ ಹೆಂಡತಿಯನ್ನು ಕೇಳಿದೆ - ಇಲ್ಲಾಂತಂದರು.
ಇಂತಹ ಸಂದರ್ಭಗಳಲ್ಲಿ ನಿಮ್ಮ ವಿಷಯ ವಾಹಕ (ಮೆಸೆಂಜರ್) ನಿಗೆ ಸೂಕ್ತ ಸಲಹೆಗಳನ್ನು ಮುಂದಾಗಿ ತಿಳಿಸಿರಿ.
ಅವರ ಬೈಕ್, ಸ್ಕೂಟರ್, ಕಾರು ರಿಪೇರಿಗೆ ಕೊಟ್ಟಿರಬಹುದು/ಇಲ್ಲವೇ ಮನೆಯಲ್ಲಿರುವ ಇನ್ನೊಬ್ಬ ತಗೊಂಡುಹೋಗಿರಬಹುದು.
ಮನೆ ಬಾಗಿಲು ಹಾಕಿದ್ದರೂ ಅವರು ಒಳಗಿರಬಹುದು.
ಅವರ ಮನೆ ದೀಪ ಕೆಟ್ಟು ಹೋಗಿರಬಹುದು.
ವಾಚ್ ಮನ್, ಹೆಂಡತಿ, ಮಕ್ಕಳು ಹೇಳಿದ್ದನ್ನು ಮಾತ್ರ ಕೇಳುವುದಲ್ಲ, ಈ ಕೆಳಗಿನ ವಿಚಾರಗಳು ಬಹು ಮುಖ್ಯ - ಅವರು ಊರಲ್ಲಿದ್ದಾರೆಯೇ?, ಯಾವ ಕಡೆ ಹೋಗಿದ್ದಾರೆ?, ಎಷ್ಟು ಹೊತ್ತಿಗೆ ಬರಬಹುದು, ನಾನು ಇಂತಹವರ ಪರವಾಗಿ ಬಂದಿದ್ದೇನೆ, ಇಂತಹ ವಿಷಯ ತಿಳಿಸಿ, ನಾನು ಪುನ: ಬರುತ್ತೇನೆ ಇಂತಿಂತಹ ವಿಷಯಗಳನ್ನು ಕೇಳಿ ತಿಳಿದುಕೊಂಡಿರಿ.

9. ಯಾರಿಗಾದರೂ ಮೊಬೈಲ್/ಟೆಲೆಫೋನ್ ಮೂಲಕ ವಿಷಯ ತಿಳಿಸಬೇಕಾದಾಗ ಕೆಳಗಿನ ವಿಚಾರ ಗಮನದಲ್ಲಿರಲಿ.
ಫೋನಾಯಿಸಿದಾಗ ನೀವು ಬಯಸಿದ ವ್ಯಕ್ತಿ ಸಿಗದಿದ್ದರೆ ಮೊದಲು ನಿಮ್ಮ ಪರಿಚಯ ಮಾಡಿಕೊಳ್ಳಿ.
ನಂತರ ಮಾತನಾಡುತ್ತಿರುವವರು ಯಾರು ಎಂದು ನಯವಾಗಿ ಕೇಳಿ ತಿಳಿದುಕೊಳ್ಳಿ.
ನೀವು ಯಾರಿಗೆ ವಿಷಯ ತಿಳಿಸಬೇಕಾಗಿದೆಯೊ ಆ ವಿಷಯ ಗೌಪ್ಯವಾದದ್ದು ಅಲ್ಲದಿದ್ದರೆ, ಮತ್ತೀಗ ಫೋನ್ ತಗೊಂಡ ವ್ಯಕ್ತಿ ತಿಳಿಸುವವನಾಗಿದ್ದರೆ, ವಿಷಯ ತಿಳಿಸಿ. ಇಲ್ಲದಿದ್ದರೆ, ನೀವು ಫೋನ್ ಮಾಡಿದ ವಿಷಯ ಹೇಳಿ ಎಂದು ತಿಳಿಸಿ. ನಿಮ್ಮ ಫೋನ್/ಮೊಬೈಲ್ ಸಂಖ್ಯೆ ಯನ್ನ ಕೊಡಲು ಮರೆಯದಿರಿ.

10. ಕೆಲವೊಮ್ಮೆ ನಾವು ಚಿಕ್ಕ ಚಿಕ್ಕ ವಿಷಯಗಳನ್ನು ಅತಿ ಕ್ಲಿಷ್ಟವಾಗಿ ಮಾಡುತ್ತೇವೆ.
ಕಡೆಯದಾಗಿ -
"ಹೇಳುವುದನ್ನು ಕೇಳಿಸಿಕೊಳ್ಳುವವರಿಗೆ ಸರಿಯಾಗಿ ಅರ್ಥವಾಗುವಂತೆ, ಕೇಳಿಸಿಕೊಳ್ಳುವಂತೆ ಹೇಳಿ"

ಕೇಳಿಸಿಕೊಳ್ಳುವ ಕಲೆ ಬೆಳೆಸಲು ಸಹಕಾರಿಯಾಗುವ ಪ್ರಶ್ನಾವಳಿ - Identify your listening skill

ನೀವು ಎಷ್ಟು ಚೆನ್ನಾಗಿ ಕೇಳಿ ಅರ್ಥ ಮಾಡಿಕೊಳ್ಳ ಬಲ್ಲಿರಿ, ಎಂಬುದನ್ನು ಈ ಕೆಳಗಿನ ಪ್ರಶ್ನಾವಳಿಯಿಂದ ಪರೀಕ್ಷಿಸಿಕೊಳ್ಳಿ:-

1. ನಾನು ಯಾವಾಗಲೂ ಮಾತನಾಡಲು ತಾಳ್ಮೆಯಿಂದ ನನ್ನ ಸರದಿಗಾಗಿ ಕಾಯುತ್ತೇನೆ.

2. ನನಗೆ ದೈನಂದಿನ ಜೇವನದಲ್ಲಿ ಚೆನ್ನಾಗಿ ಕೇಳಿಸಿಕೊಳ್ಳುವ ಪ್ರಾಮುಖ್ಯತೆಯ ಅರಿವಿದೆ.

3. ಚೆನ್ನಾಗಿ ಕೇಳಿಸಿಕೊಳ್ಳುವುದು ಒಂದು ಕಲೆ, ಅದು ಕೇವಲ ಬುದ್ದಿವಂತಿಕೆಯಲ್ಲ ಎಂದು ತಿಳಿದಿದ್ದೇನೆ ಮತ್ತು ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ.

4. ನನ್ನೊಡನೆ ಯಾರಾದರೂ ಮಾತನಾಡುತ್ತಿದ್ದರೆ ಅದಕ್ಕೆ ನಾನು ಪೂರ್ತಿ ಗಮನ ಕೊಡುತ್ತೇನೆ.

5. ನಾನು ಬೇರೆಯವರಿಗೆ ಮಾತನಾಡಲು ಅವಕಾಶ ಕೊಡುತ್ತೇನೆ.

6. ಪ್ರತಿಯೊಬ್ಬ ವ್ಯಕ್ತಿ ಒಂದಲ್ಲೊಂದು ಮುಖ್ಯ ವಿಚಾರವನ್ನ ಹೇಳಬಯಸುತ್ತಾನೆ ಮತ್ತು ನಾನದನ್ನ ತಿಳಿಯಲು ಉತ್ಸುಕನಾಗಿರುತ್ತೇನೆ.

7. ನನಗೆ ಅರ್ಥವಾಗದ ವಿಷಯದ ಮೇಲೆ ಪ್ರಶ್ನೆ ಹಾಕಿ ಆತ ತನ್ನ ವಿಶಯವನ್ನ ಸರಿಯಾಗಿ ತಿಳಿಸಲು ಸಹಕರಿಸುತ್ತೇನೆ.

8. ನನ್ನ ಹಾವಭಾವ, ಮುಖ ಚರ್ಯೆಯ ಮೂಲಕ ಮಾತನಾಡುವವರನ್ನು ಉತ್ತೇಜಿಸುತ್ತೇನೆ.

9. ನನ್ನ ನುಡಿಗಳ ಮೂಲಕ ಮಾತನಾಡುವವರನ್ನು ಹುರಿದುಂಬಿಸುತ್ತೇನೆ.

10. ನಾನು ಕೇಳಿಸಿಕೊಂಡದ್ದು ಹೀಗೆ, ಇದು ಸರಿಯೆ, ಎಂದು ಮಾತನಾಡುವವನಲ್ಲಿ ಕೇಳುತ್ತೇನೆ.

11. ಉದ್ವೇಗಕ್ಕೆ ಒಳಗಾಗಿ ಮಾತನಾಡುತ್ತಿರುವವನಿಗೆ, ಆತ ತಾನು ತಿಳಿಸಬೇಕೆಂದಿರುವ ಮೂಲ ವಿಷಯ ತಿಳಿಸಲು ಸಹಕರಿಸುತ್ತೇನೆ.

12. ಮಾತನಾಡುತ್ತಿರುವನ ಹಾವ-ಭಾವ, ಚರ್ಯೆ ಮತ್ತು ಅವುಗಳು ಕೊಡುತ್ತಿರುವ ಅರ್ಥ ಇವುಗಳ ಬಗ್ಗೆ ಅರಿವಿದೆ.

13. ನಾನು ಕೇಳಿಸಿಕೊಳ್ಳುತ್ತಿರುವ ವಿಷಯಕ್ಕೆ ಸರಿಯಾಗಿ ಹೊಂದಿಕೊಳ್ಳುವುದರಿಂದ, ಎಲ್ಲ ಮುಖ್ಯ ವಿಚಾರಗಳನ್ನ ಅರ್ಥೈಸಿಕೊಳ್ಳಲು ಸಾಧ್ಯ.

14. ನಾನು ಕೇಳಿಸಿಕೊಂಡ ಮುಖ್ಯ ವಿಷಯಗಳನ್ನು ಮೆಲುಕು ಹಾಕುತ್ತೇನೆ.

15. ಈ ಪ್ರಶ್ನಾವಳಿಗಳಿಂದ ನನ್ನನ್ನು ನಾನು ತಿಂಗಳಿಗೊಮ್ಮೆ ಪರಿಶೀಲಿಸುತ್ತೇನೆ ಮತ್ತು ನನ್ನಲ್ಲಿ ಬದಲಾವಣೆ ಮಾಡುತ್ತೇನೆ.
ಮೇಲಿನ ಪ್ರಶ್ನೆಗಳಿಗೆ "ಹೌದು (yes); ಇಲ್ಲ (no); ಉತ್ತಮಗೊಳಿಸಬೇಕು (to be improved)" ಎಂದು ಉತ್ತರಿಸಿ.

Sunday, November 20, 2011

ಕೇಳಿಸಿ ಕೊಳ್ಳುವಿಕೆ - Listening

ಸರಿಯಾಗಿ ಕೇಳಿಸಿಕೊಳ್ಳುವವನು ಮಾತ್ರ ಸರಿಯಾಗಿ ತಿಳಿಸಬಲ್ಲ.
ಪ್ರತಿಯೊಬ್ಬರೂ ಪ್ರತಿದಿನ ಕೇಳಿಸಿಕೊಳ್ಳುತ್ತಾರೆ, ಆದರೆ ಸರಿಯಾಗಿ ಕೇಳಿಸಿಕೊಳ್ಳುವವರು ಮಾತ್ರ ಬಹು ಕಮ್ಮಿ.

ನಾವು ಏತಕ್ಕೆ ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ?
1. ನಮ್ಮದೇ ಕಾರ್ಯದೊತ್ತಡ.
2. ಅನಾಸಕ್ತಿ - ತಾತ್ಸಾರ.
3. ವಿಷಯದ ಬಗ್ಗೆ ತಿಳಿವಳಿಕೆಯಿಲ್ಲದೇ ಇರುವುದು.
4. ಇಷ್ಟವಿಲ್ಲ, ಆದ್ದರಿಂದ ಬೇಡ ಎನ್ನುವ ಧೋರಣೆ.
5. ಭಾಷಣಕಾರ ಅಥವಾ ಮಾತನಾಡುವವನ ಬಗ್ಗೆ ಅನಾಧಾರಣೆ.
ಸರಿಯಾಗಿ ನಾವು ಕೇಳಿಸಿಕೊಳ್ಳದಿದ್ದರೆ, ಅವರು ಹೇಳುವುದು ಒ೦ದು ನಾವು ಕೇಳಿಸಿಕೊಳ್ಳುವುದು ಇನ್ನೊ೦ದು - ಅದನ್ನ ತಿಳಿಸುವುದು ಮತ್ತೊ೦ದು. ಅದನ್ನು ಇತರರು ಅರ್ಥೈಸಿಕೊಳ್ಳುವುದು ಮಗದೊ೦ದು. ಇದೊ೦ದು ಕೆಟ್ಟ ಚಾಳಿ.

ಉತ್ತಮ ಕೇಳಿಸಿಕೊಳ್ಳುವ ವ್ಯಕ್ತಿ:
ಭಾಷಣಕಾರನ ಭಾಷಣದ ಮೇಲೆ ಆಸಕ್ತಿ ವಹಿಸುತ್ತಾನೆ.
ಅವನ ಮುಖ, ಚರ್ಯೆ, ಹಾವ ಭಾವಗಳನ್ನು ಗಮನಿಸುತ್ತಿರುತ್ತಾನೆ.
ತನಗೆ ತಿಳಿಯದ ವಿಷಯದ ಬಗ್ಗೆ ಸೂಕ್ತ ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಪಡೆದುಕೊಳ್ಳಾತ್ತಾನೆ.
ಯಾವ ಪ್ರಚೋದನೆಗೂ ಒಳಗಾಗುವುದಿಲ್ಲ.
ಕ್ರೋಧವನ್ನು ತಡೆಹಿಡಿಯುತ್ತಾನೆ.
ಸಭೆಯಲ್ಲಿ ಮುಕ್ತ ಹಾಗೂ ಆರೋಗ್ಯಕರ ಚರ್ಚೆಗೆ ತಿಳಿಯಾದ ವಾತಾವರಣ ಕಲ್ಪಿಸುತ್ತಾನೆ.
ಯಾವುದೇ ವಿಷಯಕ್ಕೆ ಯಾವುದೇ ಸಂದರ್ಭದಲ್ಲಿ ವಾತಾವರಣ ಬಿಗಿಯಾದಾಗ, ಶಾಂತಿಯನ್ನು ಕಾಪಾಡುವಂತೆ ಎಚ್ಚರ ವಹಿಸುತ್ತಾನೆ.

ವಿ.ಸೂ.: ಒಬ್ಬ ವ್ಯಕ್ತಿ ತು೦ಬಾ ಸಮಯ ಕೇಳಿಸಿಕೊಳ್ಳುತ್ತಾ ಕುಳಿತ ಮಾತ್ರಕ್ಕೆ, ಅವನ ಕಿವಿಗೆ ಬಿದ್ದದ್ದೆಲ್ಲಾ ಅರ್ಥವಾಗಿದೆ ಎ೦ದು ತಿಳಕೊಳ್ಳುವುದು ತಪ್ಪು!

ನೀವೊಬ್ಬ ಪ್ರಭಾವಿ ವ್ಯಕ್ತಿಯಾಗಬೇಕಿದ್ದರೆ, ಕೇಳಿಸಿಕೊಳ್ಳುವ ಕಲೆಯನ್ನು ಬೆಳೆಸಿಕೊಳ್ಳಿ.

ಕೇಳಿಸಿಕೊಳ್ಳುವ ಕಲೆ ಬೆಳೆಸಿಕೊಳ್ಳಲು 5 ಮುಖ್ಯಾಂಶಗಳು -
1. ನಿಮ್ಮ ಪೂರ್ಣ ಶರೀರದಿ೦ದ ಕೇಳಿಸಿಕೊಳ್ಳಿ.
2. ಮಾತನಾಡುವವನಿಗೆ, ಮಾತಿನ ಮೂಲಕ +ವ್ ಸನ್ನೆ ನೀಡಿ.
3. ಕೇಳಿಸಿಕೊ೦ಡ ವಿಷಯವನ್ನ ಪುನ: ಹೇಳಿ ಖಾತ್ರಿಪಡಿಸಿಕೊಳ್ಳಿ.
4. ಪೂರ್ತಿ ಸಂದೇಶವನ್ನ ಕೇಳಿಸಿಕೊಳ್ಳಿ, ಕೇವಲ ಪದಗಳನ್ನಲ್ಲ.
5. ಕೇಳಿಸಿಕೊ೦ಡ ವಿಷಯದ ತಾತ್ಪರ್ಯ ಗ್ರಹಿಸಿ.

Saturday, November 19, 2011

ಮಾತು ಮುತ್ತಿನ ಮಣಿ - Do not take back once spoken

ಮಾತು ಮುತ್ತಿನ ಮಣಿಯಿದ್ದಂತೆ. ಒಮ್ಮೆ ಆಡಿದ ಮಾತು ಹಿಂತೆಗೆದುಕೊಳ್ಳಬಾರದು. ಮಾತಾಡುವ ಮೊದಲು ಯೋಚಿಸಿ, ವಿಮರ್ಶಿಸಿ ಸರಿಯಾದ್ದನ್ನ ಮಾತ್ರ ನುಡಿಯಿರಿ.

ಕೇಳುಗರಿಗೆ ಅಥವಾಗುವಂತೆ ಮಾತಾಡಿ. ನಿಮ್ಮ ಭಾಷಾ ಸೌಂದರ್ಯ, ಭಾಷಾ ಪ್ರೌಢಿಮೆ ಮುಖ್ಯವಲ್ಲ. ಹಾಗೆಯೇ ನಿಮ್ಮ ಸಂಭಾಷಣೆ ಯಾರ ಹತ್ತಿರ ಎನ್ನುವುದು ಬಹಳ ಮುಖ್ಯ.

ನಿಮಗೆ ಉತ್ತರ ಬೇಕಾದಾಗ ಮಾತ್ರ ಪ್ರಶ್ನೆ ಕೇಳಿ.

Friday, November 18, 2011

ಶ್ಲಾಘನೆಯೊಂದಿಗೆ ಪ್ರಾರಂಭಿಸಿ - Begin with positive note

ನಿಮ್ಮ ವಿಚಾರಗಳನ್ನು ತಿಳಿಸುವಾಗ ಕೇಳುಗರನ್ನು ಹೊಗಳುತ್ತಾ ಧನ್ಯವಾದಗಳೊ೦ದಿಗೆ ಆರಂಭಿಸಿ.

ಚರ್ಚೆ ಮಾಡಲೇ ಬೇಕಾದ ಪ್ರಸಂಗ ಬಂದಾಗ, ಯಾರನ್ನೇ ಆಗಲಿ ಉದ್ದೇಶಿಸಿ, ಇದು ನಿನ್ನ ತಪ್ಪು ಎಂದು ಶುರು ಮಾಡಬೇಡಿ. ಆದಷ್ಟು ಯಾರ ಮನಸ್ಸಿಗೂ ನೋವಾಗದಂತೆ, ಪಾಸಿಟಿವ್ ನೋಟ್/ವಾಕ್ಯ ನೊಂದಿಗೆ ಪ್ರಾರಂಭಿಸಿದರೆ, ನೀವೊಬ್ಬ ಪ್ರಭಾವಿ ವ್ಯಕ್ತಿಯಾಗುತ್ತೀರಿ.
ಯಾರೂ ತಮ್ಮ ತಮ್ಮ ತಪ್ಪುಗಳನ್ನು ಒಪ್ಪಲು/ಸ್ವೀಕರಿಸಲು ಕೂಡಲೇ ತಯಾರಿರುವುದಿಲ್ಲ, ಎಂದು ನೆನಪಿನಲ್ಲಿಟ್ಟುಕೊಳ್ಳಿ. ಹೆಚ್ಚಿನವರಿಗೆ ತಪ್ಪುಗಳನ್ನ ಸ್ವೀಕರಿಸಿ, ತಿದ್ದಿಕೊಳ್ಳಲು ತುಂಬಾ ಸಮಯಾವಕಾಶ ತಗಲುತ್ತದೆ.